Friday, June 26, 2026

7ನೇ ತರಗತಿಯ ಅನ್ನದಾನ ಪಾಠದ ಪ್ರಶ್ನೋತ್ತರಗಳು

 

7ನೇ ತರಗತಿಯ ಅನ್ನದಾನ ಪಾಠದ ಪ್ರಶ್ನೋತ್ತರಗಳು

 

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ಯಾವ ಯೋಚನೆ ಬಂದಿತು?

ಉತ್ತರ: ತಾಯಿ ಬರೇ ಅನ್ನದಾನವೊಂದನ್ನು ಬಿಟ್ಟಿದ್ದರೆ ತಾವೆಷ್ಟು ದೊಡ್ಡ ಶ್ರೀಮಂತರಾಗಬಹುದಿತ್ತು ಎಂಬ ಯೋಚನೆ ಮಗನಿಗೆ ಬಂದಿತು.

೨. ತಾಯಿಯು ಅನ್ನದಾನದ ಬಗ್ಗೆ ಮಗನಿಗೆ ಏನೆಂದು ಹೇಳಿದಳು?

ಉತ್ತರ: ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು ಎಂದು ತಾಯಿ ಮಗನಿಗೆ ಹೇಳಿದಳು.

೩. ತಾಯಿ ಮಗನನ್ನು ಶಿವನ ಬಳಿ ಏಕೆ ಕಳುಹಿಸಿದಳು?

ಉತ್ತರ: ಅನ್ನದಾನದ ಪುಣ್ಯವನ್ನು ಕೇಳಲು ತಾಯಿ ಮಗನನ್ನು ಶಿವನ ಬಳಿಗೆ ಕಳುಹಿಸಿದಳು.

೪. ಹುಡುಗನು ನೇಪಾಳ ದೇಶಕ್ಕೆ ಏಕೆ ಹೋದನು?

ಉತ್ತರ: ನೇಪಾಳ ದೇಶದ ರಾಜನ ಹೆಂಡತಿಗೆ ಶಿವನು ಕೊಟ್ಟ ಪ್ರಸಾದವನ್ನು ಕೊಡಲು ಹಾಗೂ ಆಕೆಗೆ ಹುಟ್ಟಿದ ಮಗುವಿನಿಂದ ಅನ್ನದಾನದ ಪುಣ್ಯವೇನೆಂದು ತಿಳಿಯಲು ಹುಡುಗನು ನೇಪಾಳಕ್ಕೆ ಹೋದನು.

೫. ಬೇಡನ ಹೆಂಡತಿ ಹಂದಿಯಾಗಿ ಹುಟ್ಟಿದ್ದು ಏಕೆ?

ಉತ್ತರ: ಬೇಡನ ಹೆಂಡತಿಯು ಹಸಿದಿದ್ದ ಹುಡುಗನಿಗೆ ತನ್ನ ಪಾಲಿನ ಹಣ್ಣು, ಹಾಲು ಕೊಡಲು ಒಪ್ಪದೆ ಅನ್ನದಾನ ಮಾಡದ ಕಾರಣ ಹಂದಿಯಾಗಿ ಹುಟ್ಟಿದಳು.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ತಾಯಿಯೊಬ್ಬಳು ಅನ್ನದಾನ ಮಾಡುತ್ತ ಮಗನೊಂದಿಗೆ ಹೇಗೆ ಜೀವಿಸುತ್ತಿದ್ದಳು?

ಉತ್ತರ: ತಾಯಿಯು ಬೇರೆಯವರ ಮನೆಯ ಕಸಮುಸುರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ತಾವಿಬ್ಬರೂ ತಿನ್ನುತ್ತಿದ್ದರು. ಒಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು, ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತ ಜೀವಿಸುತ್ತಿದ್ದಳು.

೨. ಮಗನು ತಾಯಿಯ ಅನ್ನದಾನವನ್ನು ಕಂಡು ಏನೆಂದು ಕೇಳಿದನು?

ಉತ್ತರ: "ತಾಯೀ, ಇದೇಕೆ ಹೀಗೆ ಅನ್ನದಾನ ಮಾಡುತ್ತೀ? ಒಂದೊಂದು ದಿನ ನೀನೇ ಉಪವಾಸವಿದ್ದು ಬೇರೆಯವರಿಗೆ ಅನ್ನದಾನ ಮಾಡುತ್ತೀ, ಅನ್ನದಾನವೊಂದನ್ನು ಬಿಟ್ಟಿದ್ದರೆ ನಾವು ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು. ಅದೇನು ಅನ್ನದಾನದ ಮಹತ್ತ್ವ? ಹೇಳು" ಎಂದು ಮಗ ಕೇಳಿದನು.

೩. ಬೇಡನು ಹುಡುಗನಿಗೆ ಏನೆಂದು ಹೇಳಿ ತನ್ನ ಗುಡಿಸಲಿಗೆ ಕರೆದುಕೊಂಡು ಹೋದನು?

ಉತ್ತರ: "ಏ ಹುಡುಗಾ, ಸಂಜೆ ಸಮಯದಲ್ಲಿ ಹೀಗೆ ಕಾಡಿನಲ್ಲಿ ಅಡ್ಡಾಡಿದರೆ ಏನು ಗತಿಯಾದೀತು? ಇದು ಹುಲಿ-ಸಿಂಹಗಳಿರುವ ಸ್ಥಳ. ಇಂದು ರಾತ್ರಿ ನಮ್ಮ ಗುಡಿಸಲಲ್ಲಿದ್ದು ನಾಳೆ ಹೋದೀಯಂತೆ ಬಾ" ಎಂದು ಹೇಳಿ ಬೇಡನು ಹುಡುಗನನ್ನು ಕರೆದುಕೊಂಡು ಹೋದನು.

೪. ಬೇಡನು ಹುಡುಗನನ್ನು ಯಾವ ರೀತಿ ಉಪಚರಿಸಿದನು?

ಉತ್ತರ: ಬೇಡನು ತನಗೆ ಸೇರಬೇಕಿದ್ದ ಹಣ್ಣು, ಹಾಲನ್ನು ಹುಡುಗನಿಗೆ ಕೊಟ್ಟು, ಹಾಸಿಗೆ ಹಾಸಿ ಮಲಗಿಸಿದನು. ತನಗೆ ಮಲಗಲು ಸ್ಥಳವಿಲ್ಲದಿದ್ದರಿಂದ, ಬಾಗಿಲ ಹೊರಗೆ ಕಾಲುಚಾಚಿ ಒಳಗೆ ತಲೆಯಿಟ್ಟು ಬಾಗಿಲು ತೆರೆದೇ ಮಲಗಿದನು.

೫. ಸರ್ಪ ಯಾವ ಕಷ್ಟದಲ್ಲಿ ಸಿಲುಕಿತ್ತು? ಆ ಕಷ್ಟದಿಂದ ಅದು ಹೇಗೆ ಪಾರಾಯಿತು?

ಉತ್ತರ: ಸರ್ಪವು ಹುತ್ತದ ಒಳಗೆ ಅರ್ಧ, ಹೊರಗೆ ಅರ್ಧ ಸಿಕ್ಕಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸಲಾರದೆ ಕಷ್ಟದಲ್ಲಿತ್ತು. ಹುಡುಗನು ಶಿವನಿಂದ ತಿಳಿದು ಬಂದಂತೆ, ಸರ್ಪವು ತನ್ನ ನೆತ್ತಿಯಲ್ಲಿದ್ದ ರತ್ನವನ್ನು ಯೋಗ್ಯನಾದ ಆ ಹುಡುಗನಿಗೆ ದಾನ ಮಾಡಿದ ಕೂಡಲೇ ಅದಕ್ಕೆ ಸರಿದಾಡುವ ಶಕ್ತಿ ಬಂದು ಕಷ್ಟದಿಂದ ಪಾರಾಯಿತು.

೬. ಶಿವನು ಹುಡುಗನಿಗೆ ಏನೆಂದು ಹೇಳಿ ಕಳುಹಿಸಿದನು?

ಉತ್ತರ: "ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಆಕೆಗೆ ಹುಟ್ಟುವ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯವೇನೆಂದು ಹೇಳುತ್ತದೆ" ಎಂದು ಶಿವನು ಹೇಳಿ ಕಳುಹಿಸಿದನು.

 

ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳಲ್ಲಿ ಉತ್ತರಿಸಿ.

೧. ಬೇಡ ಮತ್ತು ಆತನ ಹೆಂಡತಿ ಹುಲಿಯ ಬಾಯಿಗೆ ಹೇಗೆ ತುತ್ತಾದರು?

ಉತ್ತರ: ಕಾಡಿನಲ್ಲಿ ಸಿಕ್ಕ ಹುಡುಗನಿಗೆ ಬೇಡನು ಆಶ್ರಯ ನೀಡಿದನು. ಗುಡಿಸಲಲ್ಲಿ ಮಲಗಲು ಜಾಗವಿಲ್ಲದ ಕಾರಣ ಬಾಗಿಲ ಹೊರಗೆ ಕಾಲುಚಾಚಿ, ಒಳಗೆ ತಲೆಯಿಟ್ಟು ಬಾಗಿಲು ತೆರೆದೇ ಮಲಗಿದ್ದನು. ಆದರೆ ರಾತ್ರಿ ಬಂದ ಹುಲಿಯು ಹೊರಗರ್ಧ, ಒಳಗರ್ಧ ಮಲಗಿದ್ದ ಬೇಡನನ್ನು ಕೊಂದು ತಿಂದಿತು. ರಕ್ತದ ರುಚಿ ಹತ್ತಿ ಗುಡಿಸಲಿನ ಒಳಗೆ ಹೋಗಿ ಅವನ ಹೆಂಡತಿಯನ್ನೂ ಕೊಂದು ತಿಂದಿತು. ಹೀಗೆ ಬೇಡ ಮತ್ತು ಅವನ ಹೆಂಡತಿ ಹುಲಿಗೆ ತುತ್ತಾದರು.

೨. ಹುಡುಗನು ಶಿವನ ಬಳಿ ಕೇಳಿದ ಪ್ರಶ್ನೆಗಳಾವುವು? ಅದಕ್ಕೆ ಶಿವನು ನೀಡಿದ ಉತ್ತರಗಳೇನು?

ಉತ್ತರ: ಹುಡುಗನು ಶಿವನ ಬಳಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದನು:

೧. "ಅನ್ನದಾನದ ಪುಣ್ಯ ಯಾವುದು?" ಅದಕ್ಕೆ ಶಿವನು, "ನೇಪಾಳದ ರಾಜನ ಹೆಂಡತಿಗೆ ಪ್ರಸಾದ ಕೊಡು, ಅವಳಿಗೆ ಹುಟ್ಟುವ ಮಗು ನಿನಗೆ ಉತ್ತರ ಹೇಳುತ್ತದೆ" ಎಂದನು.

೨. "ರಾಜನು ಕೋಟಿ ಹಣ ಖರ್ಚುಮಾಡಿ ಕಟ್ಟಿಸಿದ ಕೆರೆಯಲ್ಲಿ ನೀರೇಕಿಲ್ಲ?" ಅದಕ್ಕೆ ಶಿವನು, "ರಾಜನ ಮಗಳನ್ನು ಯೋಗ್ಯ ವರನಿಗೆ ಮದುವೆ ಮಾಡಿದರೆ ನೀರು ತುಂಬುತ್ತದೆ" ಎಂದನು.

೩. "ಕುಂಟನಿಗೆ ಕಾಲು ಏಕೆ ಹೋಗಿದೆ?" ಅದಕ್ಕೆ ಶಿವನು, "ತನ್ನ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಕಾಲು ಬರುತ್ತದೆ" ಎಂದನು.

೪. "ಸರ್ಪವೊಂದು ಹುತ್ತದಲ್ಲಿ ಸಿಕ್ಕಿಬಿದ್ದಿದ್ದೇಕೆ?" ಅದಕ್ಕೆ ಶಿವನು, "ತನ್ನ ನೆತ್ತಿಯ ರತ್ನವನ್ನು ಯೋಗ್ಯನಿಗೆ ದಾನಮಾಡಿದರೆ ಸರಿದಾಡಬಹುದು" ಎಂದು ಉತ್ತರಿಸಿದನು.

೩. ಮಗು ಹುಡುಗನಿಗೆ ಅನ್ನದಾನದ ಮಹತ್ತ್ವವನ್ನು ಹೇಗೆ ತಿಳಿಸಿಕೊಟ್ಟಿತು?

ಉತ್ತರ: ನೇಪಾಳ ರಾಜನಿಗೆ ಹುಟ್ಟಿದ ಮಗುವು ಹುಡುಗನಿಗೆ, "ಕಾಡಿನಲ್ಲಿ ನಿನಗೆ ಹಣ್ಣು, ಹಾಲು ಕೊಟ್ಟು ಆಶ್ರಯ ನೀಡಿದ ಬೇಡನೇ ನಾನು. ಅಂದು ನಾನು ಹುಲಿಗೆ ತುತ್ತಾದರೂ, ನಾನು ಮಾಡಿದ ಅನ್ನದಾನದ ಪುಣ್ಯದಿಂದ ಇಂದು ರಾಜಕುಮಾರನಾಗಿ ಹುಟ್ಟಿದ್ದೇನೆ. ಆದರೆ ತನ್ನ ಪಾಲಿನ ಆಹಾರವನ್ನು ಕೊಡಲು ಒಪ್ಪದ ನನ್ನ ಹೆಂಡತಿ ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ" ಎಂದು ಹೇಳುವ ಮೂಲಕ ಅನ್ನದಾನದ ಮಹತ್ತ್ವವನ್ನು ತಿಳಿಸಿಕೊಟ್ಟಿತು.

ಈ) ಇಲ್ಲಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

೧. "ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ."

ಉತ್ತರ: ತಾಯಿಯು ತನ್ನ ಮಗನಿಗೆ ಹೇಳಿದಳು.

೨. "ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು."

ಉತ್ತರ: ಬೇಡನ ಹೆಂಡತಿಯು ತನ್ನ ಗಂಡನಾದ ಬೇಡನಿಗೆ ಹೇಳಿದಳು.

೩. "ನಿನಗಿಂತ ಯೋಗ್ಯ ವರ ಇನ್ನಾರಿದ್ದಾರೆ! ಬಾ."

ಉತ್ತರ: ಕೆರೆ ಕಟ್ಟಿಸಿದ ರಾಜನು ಶಿವನ ಬಳಿಗೆ ಹೋಗಿ ಬಂದ ಹುಡುಗನಿಗೆ ಹೇಳಿದನು.

 

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

೧. ಅಲ್ಲಿಗೊಬ್ಬ = ಅಲ್ಲಿಗೆ + ಒಬ್ಬ

೨. ಆಗಲೆಂದು = ಆಗಲಿ + ಎಂದು

೩. ಸರ್ಪವಿತ್ತು = ಸರ್ಪ + ಇತ್ತು

೪. ಕೆರೆಯಲ್ಲಿ = ಕೆರೆ + ಅಲ್ಲಿ

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

೧. ಅಪ್ಪಣೆ: ತಾಯಿಯ ಅಪ್ಪಣೆ ಪಡೆದು ಮಗನು ಶಿವನ ಬಳಿಗೆ ಹೊರಟನು.

೨. ಹಳಹಳಿಸು: ಹುಲಿ ತಿಂದ ಬೇಡ ಮತ್ತು ಆತನ ಹೆಂಡತಿಯ ಮೂಳೆಗಳನ್ನು ನೋಡಿ ಹುಡುಗನು ಬಹಳ ಹಳಹಳಿಸಿದನು.

೩. ಪ್ರಸಾದ: ನಾವು ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದೆವು.

೪. ಕೈಲಾಸ: ಶಿವ-ಪಾರ್ವತಿಯರು ಕೈಲಾಸ ಪರ್ವತದಲ್ಲಿ ನೆಲೆಸಿದ್ದಾರೆ.

೫. ದಣಿವು: ಹೊಲದಲ್ಲಿ ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದ ರೈತನಿಗೆ ಬಹಳ ದಣಿವು ಆಯಿತು.

ಇ) ಸೂಚನೆಗಳಿಗನುಸಾರ ವಾಕ್ಯಗಳನ್ನು ಪುನಃ ರಚಿಸಿರಿ.

೧. ತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದಕಾಲು ಬರುತ್ತವೆ. (ಭೂತಕಾಲದಲ್ಲಿ ಬರೆಯಿರಿ) ಉತ್ತರ: ತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದಾಗ ಹೋದ ಕಾಲು ಬಂದವು (ಅಥವಾ ದಾನ ಮಾಡಿದುದರಿಂದ ಹೋದ ಕಾಲು ಬಂದಿತು).

೨. ಹುಡುಗನನ್ನು ನೋಡಿ ಬೇಡನಿಗೆ ಕರುಣೆ ಬಂತು. (ಬಹುವಚನದಲ್ಲಿ ಬರೆಯಿರಿ)

ಉತ್ತರ: ಹುಡುಗರನ್ನು ನೋಡಿ ಬೇಡರಿಗೆ ಕರುಣೆ ಬಂತು.

೩. ಖರ್ಚುಮಾಡಿ ಕೋಟಿ ಒಂದು ಹಣ ಕೆರೆ ಕಟ್ಟಿಸಿದೆ. (ವಾಕ್ಯವನ್ನು ಸರಿಪಡಿಸಿ ಬರೆಯಿರಿ)

ಉತ್ತರ: ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ.

೪. ಹುಡುಗಾ ಎಲ್ಲಿ ಹೊರಟಿರುವೆ (ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ)

ಉತ್ತರ: "ಹುಡುಗಾ, ಎಲ್ಲಿ ಹೊರಟಿರುವೆ?"

ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

೧. ಶ್ರೀಮಂತ x ಬಡವ

೨. ಬೆಳಕು x ಕತ್ತಲು

೩. ಕರುಣೆ x ನಿಷ್ಕರುಣೆ

೪. ಅನ್ಯಾಯ x ನ್ಯಾಯ

 ೫. ಹೊರಗೆ x ಒಳಗೆ

೬. ಯೋಗ್ಯ x ಅಯೋಗ್ಯ

೭. ವಿದ್ಯೆ x ಅವಿದ್ಯೆ

೮. ಸುಖ x ದುಃಖ


DOWNLOAD PDF HERE

No comments:

7ನೇ ತರಗತಿಯ ಅನ್ನದಾನ ಪಾಠದ ಪ್ರಶ್ನೋತ್ತರಗಳು

  7ನೇ ತರಗತಿಯ ಅನ್ನದಾನ ಪಾಠದ ಪ್ರಶ್ನೋತ್ತರಗಳು   ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. ೧. ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ಯಾವ ಯೋ...