Wednesday, March 11, 2026


ಪರದೇಶಿ ಪರಭಾಷಿ ಅಭಿಮಾನಿ


ಪರದೇಶಿ ಪರಭಾಷಿ ಅಭಿಮಾನಿ ಬಿಗುಮಾನಿ 

ಸ್ವದೇಶಿ ಸ್ವಭಾಷಿ ಇಲ್ಲದ ನೀನೆಂತಾ ಸ್ವಾಭಿಮಾನಿ

ಇಲ್ಲಿ ಲೋಭದ ಚೀಲ ತುಂಬುವ ಅನುಮಾನಿ

ವಿದೇಶಿಯಿಂದಲೇ ಧನಕನಕವೆಂಬ ಗುಮಾನಿ


ಅಂದು ಬಿಳಿ ಮಂದಿಯ ಅಧಿಕಾರದ ಎಂಜಲು ನೆಕ್ಕಿ 

ನಮ್ಮವರೇ ದೇಶವನು ಗುಲಾಮಗಿರಿಗೆ ತಳ್ಳಿ 

ಇಂದು ನಮ್ಮವರೇ ನಮ್ಮಗಳ ಭಾಷೆಯನು ಕುಕ್ಕಿ

ಪರದೇಶಿ ಮಾತನೇ  ಮೇಲೆತ್ತಿ ಬೀಗುವ ಮಳ್ಳಿ 


ನೀನೆಷ್ಟು ಅರಚಿ ಕಿರುಚಿದರೂ ಕರೆಯಲ್ಲ ಬಿಳಿಜಿರಳೆ 

ಎಡವಿ ಬಿದ್ದಾಗ ಹಿಡಿದೆತ್ತಿ ಅಪ್ಪುವುದು ತಾಯ ಕರುಳೆ

ತಾಯ ಮಾತನೇ ಅಲ್ಲಗಳೆವ ಮೂಢ ಮರುಳೆ

ಇನ್ನಾವಳನೋ ಅಪ್ಪುವುದರಲೇನು  ಹುರುಳೆ


ಅಲ್ಲಷ್ಟು ಇಲ್ಲಷ್ಟು ಅಷ್ಟಷ್ಟು ಹರಕು ತುಣುಕು

ಕೊಚ್ಚಿ ಮೆಚ್ಚಿದರೂ ನಿನ್ನದೊಂದು ಮಿಣುಕು

ಹೆತ್ತ ತಾಯ ಹೊತ್ತ ನೆಲವ ಮರೆವ ಕೊಳಕು

ಮೂಢ ಮಂದ ಪೊರೆ ಹರಿದು ಬೆಳಗಲಿ ಬೆಳಕು



ನೀವೆಷ್ಟೇ ಮರೆತು ಮೆರೆದರೂ ಮರೆಯೆವು ಕನ್ನಡ

ನುಡಿ ಬಳಗ ಸೇರಿ ಮೆರೆಸುವುದು ನಮ್ಮ ಸಂಗಡ

ತಿಳಿ ನೀ ಪಳಗನ್ನಡ ನಡುಗನ್ನಡ ಹೊಸಗನ್ನಡ

ಪರದೇಶಿಗಿಂತ ಹಿರಿಯ ಮೆರಗು ಬೆರಗು ಕನ್ನಡ

1 comment:

Anonymous said...

👌

‘ನಮ್ಮ ಭಾಷೆ’ ಗದ್ಯಪಾಠದ ಅಭ್ಯಾಸದ ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸದ ಉತ್ತರಗಳು

  ನಮ್ಮ ಭಾಷೆ ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ಭಾಷೆ ಯಾವುದಕ್ಕೆ ಸಾಧನವಾಗಿದೆ?   ಉತ್ತರ: ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್...